ಭೀಮಸೇನ -
	ಪಾಂಡು ಮಹಾರಾಜನ ಪತ್ನಿ ಕುಂತಿದೇವಿಯಲ್ಲಿ ವಾಯುದೇವನ ಅನುಗ್ರಹದಿಂದ ಜನಿಸಿದವ. ಯುಧಿಷ್ಟಿರ ಅಣ್ಣ; ಅರ್ಜುನ ತಮ್ಮ; ನಕುಲ ಸಹದೇವರು ಬಲತಾಯಿ ಮಕ್ಕಳು. ಈತ ಪಾಂಡುವಿನ ಎರಡನೆಯ ಮಗ. ಈತನ ಇನ್ನೊಂದು ಹೆಸರು ವೃಕೋದರ. ಮಗುವಾಗಿದ್ದಾಗ ಈತ ಕುಂತಿಯ ಮಡಿಲಿನಿಂದ ಉರುಳಿ ಶತಶೃಂಗ ಪರ್ವತದಮೇಲೆ ಬಿದ್ದಾಗ ಆ ಪರ್ವತ ಪುಡಿಯಾಯಿತು. ಎಳೆಯ ವಯಸ್ಸಿನಲ್ಲೆ ಧೃತರಾಷ್ಟ್ರನ ಹಿರಿಯಮಗ ದುರ್ಯೋ ಧನನನ್ನು ಸೋಲಿಸಿದ್ದ. ಅಲ್ಲಿಂದ ಇವರಲ್ಲಿ ವಿರಸ. ಹೇಗಾದರೂ ಮಾಡಿ ಈತನನ್ನು ಕೊಲ್ಲಬೇಕೆಂದು ದುರ್ಯೋ ಧನ ಕುಟಿಲೋಪಾಯಗಳಿಂದ ವಿಷವುಣ್ಣಿಸಿದ; ಹಾವುಗಳಿಂದ ಕಚ್ಚಿಸಿದ; ನೀರಲ್ಲಿ ಮುಳುಗಿಸಿದ. ಈ ಎಲ್ಲ ಅಪಾಯಗಳಿಂದಲೂ ಭೀಮ ಪಾರಾದ. ಮುಂದೆ ಬಲರಾಮನಲ್ಲಿ ಗದಾಯುದ್ಧ ಅಭ್ಯಾಸಮಾಡಿದ. ಪಾಂಡವರನ್ನೆ ಧ್ವಂಸಮಾಡಿಬಿಡಬೇಕೆಂದು ಕೌರವ ಅರಗಿನಮನೆ ಕಟ್ಟಿಸಿ ಇವರು ಒಳಗಿದ್ದಾಗ ಗುಪ್ತವಾಗಿ ಅದನ್ನು ಸುಡಿಸಿದ. ಆದರೆ ಸುರಂಗದ ಮೂಲಕ ಸಹೋದರರೊಂದಿಗೆ ಅರಣ್ಯಕ್ಕೆ ನಡೆದು ಭೀಮ ಪಾರಾದ. ಅರಣ್ಯದಲ್ಲಿ ಭೀಮನ ಸಹೋದರರು ನಿದ್ರೆಮಾಡುತ್ತಿದ್ದಾಗ ಹಿಡಿಂಬ ಎಂಬ ರಾಕ್ಷಸ ಇವರನ್ನೆಲ್ಲ ಕೊಲ್ಲಲು ಬಂದಾಗ ಭೀಕರ ಕಾಳಗ ನಡೆಸಿ ಹಿಡಿಂಬನನ್ನು ಕೊಂದು ಅವನ ತಂಗಿ ಹಿಡಿಂಬೆ ಶಮಲಪಾಲಿಕೆಯನ್ನು ವಿವಾಹವಾದ. ಹಿಡಿಂಬೆ ಗರ್ಭವತಿಯಾಗಿ ಘಟೋತ್ಕಚನೆಂಬ ಮಗನನ್ನು ಹೆತ್ತಳು. ಭೀಮನಿಗೆ ಹತ್ತು ಸಾವಿರ ಆನೆಗಳ ಬಲವಿದ್ದು ಎದುರಾಳಿಗಳನ್ನು ಕ್ಷಣಮಾತ್ರದಲ್ಲಿ ಮಣ್ಣು ಮುಕ್ಕಿಸುವ ಶಕ್ತಿಯಿತ್ತು. ಏಕಚಕ್ರನಗರಗಳಲ್ಲಿ ಉಪದ್ರವಕಾರಿಯಾಗಿ ಊರನ್ನೆ ಹಾಳುಮಾಡುತ್ತಿದ್ದ ಬಕಾಸುರನನ್ನು ಸಂಹರಿಸಿದ. ಕಾಶಿ ರಾಜನ ಮಗಳು ಜಲಂಧರೆಯನ್ನು ವಿವಾಹವಾದ. ಇವಳಿಂದ ಶರ್ವತ್ರಾತ ಎಂಬ ಮಗನನ್ನು ಪಡೆದ. ದ್ರುಪದನ ಮಗಳಾದ ದ್ರೌಪದಿಯೇ ಪತ್ನಿಯರಲ್ಲಿ ಮುಖ್ಯಳು. ಇವಳಲ್ಲಿ ಶ್ರುತಸೋಮ ಎಂಬ ಮಗನನ್ನು ಪಡೆದ.

	ದ್ರೌಪದಿಯ ಸ್ವಯಂವರದ ಸಂದರ್ಭದಲ್ಲಿ ಕೌರವರಿಗೂ ಪಾಂಡವರಿಗೂ ನಡೆದ ಕಾಳಗದಲ್ಲಿ ಭೀಮ ಶಲ್ಯನನ್ನು ಸೋಲಿಸಿದ. ಇನ್ನೊಬ್ಬ ದುಷ್ಟ ಜರಾಸಂಧನನ್ನು ಬಾಹುಯುದ್ಧದಲ್ಲಿ ಸಂಹರಿಸಿದ. ಮಾಯಾಸುರನೆಂಬವ ಬಿಂದುಸರೋವರದಿಂದ ದಿವ್ಯವಾದ ಗದೆಯನ್ನು ಭೀಮನಿಗೆ ತಂದು ಕೊಟ್ಟ. ಮುಂದೆ ರಾಜಸೂಯಯಾಗದಲ್ಲಿ ದಶಾರ್ಣದೇಶವನ್ನು ಗೆದ್ದ. ತುಂಬಿದ ಸಭೆಯಲ್ಲಿ ದುರ್ಯೋ ಧನ ದ್ರೌಪದಿಯ ಸೀರೆಯನ್ನು ಸೆಳೆಸುವಾಗ ಅವನ ತೊಡೆಯನ್ನು ಮುರಿಯುವ ಪ್ರತಿಜ್ಞೆ ಮಾಡಿದ. ದುಶ್ಯಾಸನನ ರಕ್ತದಿಂದ ದ್ರೌಪದಿಯ ಕೇಶವನ್ನು ಕಟ್ಟುವುದಾಗಿಯೂ ಆಣೆ ಹಾಕಿದ. ದ್ಯೂತದಲ್ಲಿ ಸೋತು ಅರಣ್ಯವಾಸ ಅನುಭವಿಸುವಾಗ ಕಿಮ್ಮೀರನೆಂಬ ರಾಕ್ಷಸನನ್ನು ಸಂಹರಿಸಿದ. ದ್ರೌಪದಿಗೆ ಸೌಗಂಧಿಕಾಪುಷ್ಪವನ್ನು ಅತ್ಯಂತ ಸಾಹಸದಿಂದ ತಂದುಕೊಟ್ಟ ಕೀರ್ತಿ ಈತನದು. ಆಗ ಅಡ್ಡ ಬಂದ ಮಣಿಮಂತನೆಂಬ ಖೂಳನನ್ನು ಸಂಹರಿಸಿದ.

	ಒಂದು ವರ್ಷದ ಅಜ್ಞಾತವಾಸದಲ್ಲಿ ವಲಲ ಎಂಬ ಹೆಸರಿನಿಂದ ಅಡುಗೆಯವನಾದ. ವಿರಾಟನಗರದಲ್ಲಿದ್ದಾಗ ಜೀಮೂತ ಎಂಬ ಜಟ್ಟಿಯನ್ನು ಕೊಂದ. ದ್ರೌಪದಿಯನ್ನು ಬಯಸಿದ ಕೀಚಕನನ್ನು ಗರಡಿಮನೆಯಲ್ಲಿ ಕೊಂದು ಕೀಚಕನ ತಮ್ಮಂದಿರನ್ನೂ ಸಂಹರಿಸಿದ. ದುರ್ಯೋ ಧನಾದಿಗಳು ಗೋಗ್ರಹಣ ಮಾಡಿದ ಸಂದರ್ಭದಲ್ಲಿ ದಕ್ಷಿಣ ಗೋಗ್ರಹಣದಲ್ಲಿ ಸುಶರ್ಮ ವಿರಾಟನನ್ನು ಸೆರೆಹಿಡಿದಿದ್ದಾಗ ಭೀಮ ಅವನನ್ನು ಬಿಡಿಸಿದ.

	ಪಾಂಡವರಿಗೂ ಕೌರವರಿಗೂ ನಡೆದ ಮಹಾಭಾರತ ಯುದ್ಧದ ಐದನೆಯ ದಿವಸ ಭೀಮ ದುರ್ಯೋ ಧನನನ್ನು ಪರಾಭವಗೊಳಿಸಿದ. ಏಳನೆಯ ದಿನದ ಯುದ್ಧದಲ್ಲಿ ಭೀಷ್ಮನನ್ನು ಗಾಸಿಗೊಳಿಸಿ, ದುರ್ಯೋ ಧನನ ಎಂಟುಮಂದಿ ಸಹೋದರರನ್ನು ಕೊಂದ. ಹನ್ನೊಂದನೆಯ ದಿನ ಶಲ್ಯನನ್ನು ಗದಾಯುದ್ಧದಲ್ಲಿ ಗಾಸಿಗೊಳಿಸಿದ. ಹದಿನಾಲ್ಕನೆಯ ದಿನ ಹಗಲಿನ ಯುದ್ಧದಲ್ಲಿ ದ್ರೋಣ ಭೀಮನನ್ನು ಗಾಸಿಗೊಳಿಸಿದಾಗ ದ್ರೋಣನ ರಥ ಪುಡಿಪುಡಿಮಾಡಿದ. ಕರ್ಣನೊಂದಿಗೆ ಹೋರಾಡಿ ಅವನನ್ನೂ ಗಾಸಿಗೊಳಿಸಿದ. ಕರ್ಣನ ಒತ್ತಾಸೆಗೆ ಬಂದ ದುರ್ಜಯನನ್ನು ಕೊಂದುಹಾಕಿದ. ದುರ್ಯೋ ಧನನ ಸಹೋದರರಲ್ಲಿ ವಿಕರ್ಣ ಮುಂತಾದ ಐವರನ್ನು ಸಂಹರಿಸಿದ. ದುರ್ಮದ ದುಷ್ಯರಣರನ್ನು ಅಂದೇ ಸಂಹರಿಸಿದ. ಜೊತೆಗೆ ಬಾಹ್ಲೀಕರಾಜನನ್ನು, ಹತ್ತು ಮಂದಿ ಕೌರವರನ್ನು ಶಕುನಿಯ ಐವರು ತಮ್ಮಂದಿರನ್ನು ಕೊಂದುಹಾಕಿದ. ಹದಿನಾರನೆಯ ದಿನ ಕ್ಷೇಮಧೂರ್ತಿಯನ್ನು ವಧೆಮಾಡಿದ. ಶಕುನಿಯೊಂದಿಗೆ ಹೋರಾಡಿ ಅವನನ್ನು ಗಾಸಿಗೊಳಿಸಿದ. ಅಂದೇ ದುಶ್ಯಾಸನನೊಂದಿಗೆ ಹೋರಾಡಿ ಅವನನ್ನು ಸೀಳಿ ರಕ್ತಪಾನಮಾಡಿ ದ್ರೌಪದಿಯ ಕೇಶ ಕಟ್ಟಿದ. ದುಶ್ಯಾಸನನ ಹಲವು ತಮ್ಮಂದಿರನ್ನೂ ಸಂಹರಿಸಿದ. ಹದಿನೆಂಟನೆಯ ದಿನ ಶಲ್ಯನೊಂದಿಗೆ ಗದಾಯುದ್ಧ ಮಾಡಿದ. ದುರ್ಯೋ ಧನನೊಬ್ಬನನ್ನು ಬಿಟ್ಟು ಉಳಿದ ಅವನ ಸಹೋದರರನ್ನೆಲ್ಲ ಕೊಂದು ಮುಗಿಸಿದ. ದುರ್ಯೋ ಧನ ಪ್ರಾಣಭಯದಿಂದ ವೈಶಂಪಾಯನ ಸರೋವರದಲ್ಲಿ ಮುಳುಗಿದ್ದ ಸುದ್ದಿಯನ್ನು ಬೇಡನಿಂದ ತಿಳಿದು ಅವನನ್ನು ಚುಚ್ಚು ಮಾತುಗಳಿಂದ ಮೇಲಕ್ಕೆ ಬರುವಂತೆ ಮಾಡಿ, ಅವನೊಂದಿಗೆ ಗದೆಯಲ್ಲಿ ಸೆಣಸಿ ತೊಡೆಮುರಿದ. ಅವನು ಮಾಡಿದ ದುಷ್ಕøತ್ಯಗಳನ್ನು ಒಂದೊಂದಾಗಿ ಹೇಳಿ ಎಡಗಾಲಿನಿಂದ ಕೌರವನ ತಲೆಯನ್ನು ಒದ್ದ. ಇದನ್ನು ಸಹಿಸಲಾರದೆ ಬಲರಾಮ ಭೀಮನನ್ನು ಕೊಲ್ಲಲು ಹೊರಟಾಗ ಕೃಷ್ಣ ಅವನನ್ನು ತಡೆದ. ಉಪಪಾಂಡವರನ್ನು ದೃಷ್ಟದ್ಯುಮ್ನನನ್ನು ಕೊಂದದ್ದಕ್ಕಾಗಿ ಅಶ್ವತ್ಥಾಮನನ್ನು ಕೊಲ್ಲಲು ಉದ್ಯುಕ್ತನಾದ. ದುರ್ಯೋ ಧನನನ್ನು ಕೊಂದದ್ದು ಸರಿಯೆಂದು ಗಾಂಧಾರಿಯೊಂದಿಗೆ ಸಮರ್ಥಿಸಿಕೊಂಡ.

	ಪಾಂಡವರ ರಾಜ್ಯಭಾರದ ಅಂತ್ಯದಲ್ಲಿ ಮಹಾಪ್ರಸ್ಥಾನಕ್ಕೆ ಹೊರಟಾಗ ಈತನ ದೇಹಪಾತವಾಗುತ್ತದೆ. ಪಂಪನ ವಿಕ್ರಮಾರ್ಜುನ ವಿಜಯದಲ್ಲಿಯೂ ಈತ ಹುಂಬುಗಾರನಾಗಿ ದೇಹಸಾಮಥ್ರ್ಯದಿಂದ ತನ್ನ ಪ್ರತಿಜ್ಞೆಯನ್ನು ನೆರವೇರಿಸಿಕೊಳ್ಳುವವನಾಗಿ ಕಂಡುಬರುತ್ತಾನೆ. ರನ್ನ ತನ್ನ ಕಾವ್ಯದ ನಾಯಕನ ಪಟ್ಟವನ್ನೆ ಈತನಿಗೆ ಕೊಟ್ಟು ಕಾವ್ಯಕ್ಕೆ ಸಾಹಸಭೀಮವಿಜಯ ಎಂದು ಹೆಸರಿಟ್ಟ. ಅವನ ಕಾವ್ಯದಲ್ಲಿ ಶೌರ್ಯ ಪರಾಕ್ರಮಗಳಿಂದ ವಿಜೃಂಭಿಸಿದ ಈತ ಅಲ್ಲಿ ಅತ್ಯಂತ ಸ್ವತಂತ್ರವ್ಯಕ್ತಿಯಾಗಿ ಕಂಗೊಳಿಸಿದ್ದಾನೆ.

	ಇದೇ ವಂಶದ ಇನ್ನಿಬ್ಬರು ಭೀಮಸೇನರಿದ್ದಾರೆ. ಒಬ್ಬ ಪಾಂಡವರಿಗಿಂತಲೂ ಹಿಂದಣ ಅರಸು ಪರೀಕ್ಷಿತ್ ರಾಜನ ಮಗ. ಪರಿಶ್ರವನ ತಂದೆ. ಇನ್ನೊಬ್ಬ ಅಭಿಮನ್ಯು ಪುತ್ರನಾದ ಪರೀಕ್ಷದ್ರಾಜನ ಮಗ. ಜನಮೇಜಯರಾಯನ ಒಡಹುಟ್ಟಿದವ. 
										(ಬಿ.ಎನ್.ಎನ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ